ನರಸಿಂಹಪುರ -
	ಮಧ್ಯಪ್ರದೇಶ ರಾಜ್ಯದ ಜಬಲ್ಪುರ ಭಾಗದ ಒಂದು ಜಿಲ್ಲೆ: ಈ ಜಿಲ್ಲೆಯ ಮುಖ್ಯ ಪಟ್ಟಣ. ನರಸಿಂಗಪುರವೆಂದೂ ಇದಕ್ಕೆ ಹೆಸರುಂಟು. ಉ.ಅ.220 37`-23 15 ಮತ್ತು ಪೂ.ರೇ. 780 27`-79 38` ನಡುವೆ ಇರುವ ಜಿಲ್ಲೆಯ ಉತ್ತರಕ್ಕೆ ರಾಯ್‍ಸೇನ್ ಮತ್ತು ರಾಯ್‍ಸಾಗರ್ ಜಿಲ್ಲೆಗಳು, ಈಶಾನ್ಯಕ್ಕೆ ಜಬಲ್ಪುರ ಜಿಲ್ಲೆ. ಆಗ್ನೇಯಕ್ಕೆ ಸಿವನಿ. ಪಶ್ಚಿಮಕ್ಕೆ ಹೋಶಂಗಾಬಾದ್ ಜಿಲ್ಲೆ, ದಕ್ಷಿಣಕ್ಕೆ ಛಿಂದ್‍ವಾಡಾ ಜಿಲ್ಲೆಗಳೂ ಇವೆ. ಜಿಲ್ಲೆಯ ದಕ್ಷಿಣಕ್ಕೆ ಸಾತ್‍ಪುಡಾ ಪರ್ವತಶ್ರೇಣಿ ಇದೆ. ಉತ್ತರದಲ್ಲಿ ನರ್ಮದಾ ನದಿ ಹರಿಯುತ್ತದೆ. ದಕ್ಷಿಣದಿಂದ ಅನೇಕ ಉಪನದಿಗಳು ನರ್ಮದಾ ನದಿಯನ್ನು ಕೂಡುತ್ತವೆ. ಜಿಲ್ಲೆಯ ವಿಸ್ತೀರ್ಣ 5138 ಕಿ.ಮೀ. ಜನಸಂಖ್ಯೆ 5,19,270 (1971). ಜಿಲ್ಲೆಯಲ್ಲಿ ಫಲವತ್ತಾದ ಎರೆಮಣ್ಣಿನ ನೆಲ ಇದೆ. ವಾರ್ಷಿಕ ಸರಾಸರಿ ಮಳೆ 1295 ಮಿ.ಮೀ. ಗೋಧಿ, ಹತ್ತಿ, ಜೋಳ, ದ್ವಿದಳ ಧಾನ್ಯ, ಎಣ್ಣೆಕಾಳು ಇವು ಮುಖ್ಯ ಬೆಳೆಗಳು. ಜಿಲ್ಲೆಯ ಅರಣ್ಯೋತ್ತರ ಗಮನಾರ್ಹವಾದುದು. ಬಟ್ಟೆಯ ನೇಯ್ಗೆ, ಬಟ್ಟೆಗಳಿಗೆ ಬಣ್ಣ ಹಾಕುವುದು, ಹಿತ್ತಾಳೆಯ ಕೆಲಸ, ಗಾಜಿನ ಬಳೆಗಳ ತಯಾರಿಕೆ ಮುಂತಾದ ಸಣ್ಣ ಕೈಗಾರಿಕೆಗಳಿವೆ. ಜಿಲ್ಲೆಯಲ್ಲಿ ಕಲ್ಲಿದ್ದಲು ಸಿಗುತ್ತದೆ.

	ಜಿಲ್ಲೆಯಲ್ಲಿ ಗದರ್‍ವಾಲಾ (2,49,401) (1971) ಮತ್ತು ನರಸಿಂಹಪುರ (2.69.869) ತಾಲ್ಲೂಕುಗಳಿವೆ.

	ನರಸಿಂಹಪುರ ಪಟ್ಟಣ ಈ ಜಿಲ್ಲೆಯ ಮುಖ್ಯಸ್ಥಳ. ಉ.ಅ. 220 57 ಮತ್ತು ಪೂ.ರೇ. 790 13 ಮೇಲೆ, ಸಿಂಗ್ರಿ ನದಿಯ ಎರಡೂ ಬದಿಗಳಲ್ಲಿ ಹರಡಿದೆ. ಇದು ಮಧ್ಯ ರೈಲ್ವೆಯ ಒಂದು ನಿಲ್ದಾಣ. ಜಬಲ್‍ಪುರ ಜಂಕ್ಷನ್‍ನಿಂದ 80 ಕಿ.ಮೀ. ಮತ್ತು ಔರಂಗಾಬಾದ್‍ನಿಂದ 152 ಕಿ.ಮೀ. ದೂರದಲ್ಲಿರುವ ಈ ಪಟ್ಟಣ ಜಿಲ್ಲೆಯ ವ್ಯಾಪಾರಕೇಂದ್ರ. ನದಿಯ ಪೂರ್ವಕ್ಕಿರುವ ಭಾಗಕ್ಕೆ ಕಾಂದೇಲಿ ಎಂದೂ ಪಶ್ಚಿಮದ ಭಾಗಕ್ಕೆ ನರಸಿಂಹಪುರ ಎಂದೂ ಹೆಸರುಗಳಿವೆ. ಈ ಪಟ್ಟಣಕ್ಕೆ ಹಿಂದೆ ಛೋಟಾ ಗದರ್‍ವಾಲಾ ಎಂಬ ಹೆಸರಿತ್ತು. 19ನೆಯ ಶತಮಾನದ ಆದಿಯಲ್ಲಿ ಇಲ್ಲಿ ಕಟ್ಟಿಸಿದ ನರಸಿಂಹ ಮಂದಿರದಿಂದ ಈ ಪಟ್ಟಣಕ್ಕೆ ನರಸಿಂಹಪುರವೆಂಬ ಹೆಸರು ಪ್ರಾಪ್ತವಾಯಿತು. ಮರ ಕೊಯ್ಯುವುದು ಇಲ್ಲಿಯ ಮುಖ್ಯ ಕೈಗಾರಿಕೆ. ಇಲ್ಲಿ ಸಾಗರ್ ವಿಶ್ವವಿದ್ಯಾಲಯದಿಂದ ಮನ್ನಣೆ ಪಡೆದ ಒಂದು ಕಾಲೇಜಿದೆ. ಪಟ್ಟಣದ ಜನಸಂಖ್ಯೆ 25,552 (1971).		
(ಬಿ.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ